ಫಿಶರ್, ಎಮಿಲ್ ಹರ್ಮನ್
1852-1919. ಜರ್ಮನ್ ರಸಾಯನ ವಿಜ್ಞಾನಿ. ಜನನ 9-10-1852, ಮರಣ 15-7-1919. ಫಿಶರನ ತಂದೆಯ ಕಸಬು ವಾಣಿಜ್ಯ ವಹಿವಾಟು. ಮಗನನ್ನೂ ಇದೇ ದಂಧೆಗೆ ಹಚ್ಚ ಬೇಕೆಂದು ಆತನ ಅಪೇಕ್ಷೆ. ಆದರೆ ಇವನಿಗೆ ಅದು ಸ್ವಲ್ಪವೂ ಹಿಡಿಸದು. ಹೀಗಾಗಿ ವಿಧಿಯಲ್ಲದೆ ಇವನನ್ನು ಉನ್ನತ ವಿದ್ಯಾಭ್ಯಾಸಕ್ಕೆ ಕಳುಹಿಸಬೇಕಾಯಿತು. ಫಿಶರನ ಮೂಲ ಆಸಕ್ತಿ ಭೌತವಿಜ್ಞಾನದಲ್ಲಿತ್ತು. ಆದರೆ ಬಾನ್ ವಿಶ್ವವಿದ್ಯಾಲಯದಲ್ಲಿ ಕೆಕುಲೆ ಮತ್ತು ಸ್ಟ್ರಾಸ್‍ಬರ್ಗಿನಲ್ಲಿ ಅಡಾಲ್ಫ್ ಬೇಯರ್ ಅಂಥ ಘಟಾನುಘಟಿಗಳ ಶಿಷ್ಯವೃತ್ತಿ ಮಾಡಿದಾಗ ರಸಾಯನವಿಜ್ಞಾನದಲ್ಲಿ ಅಭಿರುಚಿ ಹುಟ್ಟಿತು. ಬೇಯರನ ಮಾರ್ಗದರ್ಶನದಲ್ಲಿ ಫ್ತ್ಯಾಲೈನ್ ವರ್ಗದ ರಂಗುಗಳನ್ನು ಕುರಿತ ಸಂಶೋಧನೆಗಾಗಿ ಡಾಕ್ಟೊರೇಟ್ ಪ್ರಶಸ್ತಿ ದೊರೆಯಿತು. ಸ್ಟ್ರಾಸ್‍ಬರ್ಗಿನಲ್ಲಿ ಇವನು ನಡೆಸಿದ ಇನ್ನೊಂದು ಸಂಶೋಧನೆಯೆಂದರೆ ಫೀನೈಲ್ ಹೈಡ್ರಜೀನಿನ ಶೋಧನೆ. ಇದು ಏಕಶರ್ಕರಗಳೊಡನೆ (ಮಾನೊಸ್ಯಾಕರೈಡ್ಸ್) ವರ್ತಿಸಿ ಓಸಜೋನುಗಳೆಂಬ ಹಳದಿ ಬಣ್ಣದ ಹರಳುರೂಪದ ಅದ್ರಾವ್ಯ ಪದಾರ್ಥಗಳನ್ನು ಕೊಡುತ್ತಿತ್ತು. ಸೂಕ್ಷ್ಮ ದರ್ಶಕದಲ್ಲಿ ಇವುಗಳ ಸ್ಫಟಿಕ ರಚನೆ ಪರೀಕ್ಷಿಸಿ ಮೂಲ ಶರ್ಕರ ಇಂಥದೆ ಎಂದು ಗುರುತಿಸಬಹುದಾಗಿತ್ತು. ಮುಂದೆ ಈತ ಮಾಡಿದ ಶರ್ಕರಗಳನ್ನು ಕುರಿತು ಸಂಶೋಧನೆಯಲ್ಲಿ ಈ ಪರಿವರ್ತಕದ ಪಾತ್ರ ಹಿರಿದು. ಶರ್ಕರಷಿಷ್ಟಾದಿಗಳ (ಕಾರ್ಬೊಹೈಡ್ರೇಟ್ಸ್) ಕ್ಷೇತ್ರದಲ್ಲಿ ಫಿಶರ್ ನಡೆಸಿದ ಸಂಶೋಧನೆಗಳ ಪೈಕಿ ಮ್ಯಾನೋಸ್ ಗ್ಲೂಕೋಸ್ ಮತ್ತು ಫ್ರಕ್ಟೋಸ್ ಮುಂತಾದ ಸರಳ ಶರ್ಕರಗಳ ಸಂಶ್ಲೇಷಣೆ, ಗ್ಲೈಕೊಸೈಡುಗಳ ಅಂಗರಚನೆ ಮತ್ತು ಅವನ್ನು ಜಲವಿಭಜಿಸಬಲ್ಲ ಕಿಣ್ವಗಳ ಬಗ್ಗೆ ಪ್ರಯೋಗಗಳು ಉಲ್ಲೇಖಾರ್ಹ.

	ಎರ್ಲಾಂಗೆನ್ (1882), ವುರ್ಸ್‍ಬರ್ಗ್ (1885) ಮತ್ತು ಬರ್ಲಿನ್ (1892) ವಿಶ್ವವಿದ್ಯಾಲಯಗಳಲ್ಲಿ ರಸಾಯನವಿಜ್ಞಾನ ಪೀಠಗಳನ್ನು ಅಲಂಕರಿಸಿದ್ದ ಫಿಶರ್ ಹೋದಲ್ಲೆಲ್ಲ ದಕ್ಷ ಅಧ್ಯಾಪಕ ಮತ್ತು ಸಂಶೋಧಕನೆಂದು ಹೆಸರು ಗಳಿಸಿದ. ಆಗ ಕಲ್ಲಿದ್ದಲ ಡಾಂಬರಿನಿಂದ ಮಾತ್ರ ತಯಾರಿಸಬಹುದಾಗಿದ್ದ ಕೆಲವು ರಂಗುಗಳ ಅಂಗರಚನೆಯನ್ನು ಕಂಡುಹಿಡಿದು ಅವನ್ನು ಪ್ರಯೋಗ ಶಾಲೆಯಲ್ಲೂ ಸಂಶ್ಲೇಷಿಸಬಹುದು ಎಂದು ತೋರಿಸಿ ವರ್ಣದ್ರವ್ಯ ಕ್ಷೇತ್ರದಲ್ಲಿ ಇತಿಹಾಸ ನಿರ್ಮಿಸಿದ. ಇದಾದ ತರುವಾಯ ಬಂದುದೆ ಪ್ಯೂರೀನ್ ವರ್ಗದ ಸಂಯುಕ್ತಗಳ ಶೋಧ. ಯೂರಿಕ್ ಆಮ್ಲ ಕಾಫಿ ಟೀ ಇತ್ಯಾದಿಗಳಲ್ಲಿರುವ ಕೆಫೀನ್ ಥಿಯೊಬ್ರೊಮೀನ್ ಥಿಯೊಫಿಲೀನ್ ಈ ಗುಂಪಿಗೆ ಸೇರಿದ ಪದಾರ್ಥಗಳು. ಇವೆಲ್ಲ ನಮ್ಮ ದೈಹಿಕ ವ್ಯಾಪಾರಗಳ ಮೇಲೆ ಪ್ರಭಾವ ಬೀರುವ ರಾಸಾಯನಿಕಗಳು. ಇವುಗಳ ಆಂತರಿಕ ರಚನೆಯನ್ನು ಶೋಧಿಸಿ ಇವನ್ನು ಸಂಶ್ಲೇಷಿಸಿದುದು ಫಿಶರನ ಮಹತ್ಸಾಧನೆಗಳಲ್ಲೊಂದು, ಶರ್ಕರಪಿಷ್ಟಾದಿಗಳು ಮತ್ತು ಪ್ಯೂರೀನ್ ಸಂಯುಕ್ತಗಳನ್ನು ಕುರಿತ ಇವನ ಅಮೂಲ್ಯ ಸಂಶೋಧನೆಗಳಿಗಾಗಿ 1902ರಲ್ಲಿ ಇವನಿಗೆ ನೊಬೆಲ್ ಪಾರಿತೋಷಿಕ ದೊರೆಯಿತು. ರಸಾಯನವಿಜ್ಞಾನಕ್ಕಾಗಿ ಈ ಪ್ರಶಸ್ತಿ ಪಡೆದವರಲ್ಲಿ ಈತ ಎರಡನೆಯವ.

	ಇದರಿಂದ ಉತ್ತೇಜಿತನಾದ ಫಿಶರ್ ಪ್ರೋಟೀನುಗಳ ಸಂಶೋಧನೆಯಲ್ಲಿ ತೊಡಗಿದ. ಇವು ಆಲ್ಫಾ ಅಮೈನೋ ಆಮ್ಲಗಳೆಂಬ ಘಟಕಗಳಿಂದಾಗಿವೆ. ಇವುಗಳ ಅಣುಗಳಲ್ಲಿ ಅಸಮಾಂಗೀಯ (ಅಸಿಮೆಟ್ರಿಕ್) ಕಾರ್ಬನ್ ಪರಮಾಣುಗಳೂ ಅಸಮಾಂಗತೆಯ ಲಕ್ಷಣಗಳೂ ಇರುವುದರಿಂದ ಇವು ದ್ಯುತಿಪಟುತ್ವ (ಆಪ್ಟಿಕಲ್ ಆಕ್ಟಿವಿಟಿ) ಪಡೆದಿರುತ್ತವೆ. ಇವನ್ನು ಸಂಶ್ಲೇಷಿಸಿದಾಗ ದ್ಯುತಿಪಟುತ್ವಹೀನ (ಆಪ್ಟಿಕಲಿ ಇನ್ಯಾಕ್ಟಿವ್) ಮಿಶ್ರಣ ದೊರೆಯುತ್ತದೆ. ಮಿಶ್ರಣವನ್ನು ಅದರಲ್ಲಿರುವ ದ್ಯುತಿ ಪ್ರತೀಪಕಗಳಿಗೆ (ಆಪ್ಟಿಕಲ್ ಆಂಟಿಪೋಡ್ಸ್) ಪ್ರತ್ಯೇಕಿಸುವ ವಿಶಿಷ್ಟ ವಿಧಾನಗಳನ್ನು ಫಿಶರ್ ರೂಪಿಸಿದ. ಎರಡು ಅಮೈನೋ ಆಮ್ಲಗಳ ಸಂಯೋಗದಿಂದ ಡೈಪೆಪ್ಟೈಡ್ ಮೂರು ಅಮೈನೋ ಆಮ್ಲಗಳ ಮಿಲನದಿಂದ ಟ್ರೈಪೆಪ್ಟೈಡ್, ಹಾಗೆಯೇ ಅನೇಕ ಅಮೈನೋ ಆಮ್ಲಗಳು ಕೂಡಿ ಪಾಲಿಪೆಪ್ಟೈಡ್ ಸರಣಿ ಉಂಟಾಗುತ್ತವೆ. ಪ್ರೋಟೀನುಗಳು ಇಂಥ ಪಾಲಿಪೆಪ್ಟೈಡ್ ಸರಣಿಗಳಿಂದಾದ ಬೃಹದಣುಗಳು. ಅಬ್ಡೆರ್‍ಹಾಲ್ಡೆನ್ನನ ಸಹಚರ್ಯೆಯಲ್ಲಿ ಫಿಶರ್ ಹದಿನೆಂಟು ಅಮೈನೋ ಆಮ್ಲಗಳನ್ನು ಒಳಗೊಂಡ ಒಂದು ಪಾಲಿಪೆಪ್ಟೈಡನ್ನು ಸಂಶ್ಲೇಷಿಸಿದ. ಇದರಿಂದ ನಿಸರ್ಗದಲ್ಲೂ ಇಂಥ ಕ್ರಿಯೆಯೇ ನಡೆದು ಪ್ರೋಟೀನುಗಳು ಮೈದಳೆಯುತ್ತವೆ ಎಂಬುದು ಸ್ಥಿರಪಟ್ಟಿತು. ಕಲಿಲ ತಜ್ಞನೆನಿಸಿಕೊಂಡಿದ್ದ ಸ್ವೀಡಿಶ್ ವಿಜ್ಞಾನಿ  ಸ್ಟೆಡ್‍ಬರ್ಗ್‍ನಿಂದ ಪ್ರೇರಿತನಾಗಿ ಫಿಶರ್ ಇತರ ಬೃಹದಣುಗಳ ಸಂಶ್ಲೇಷಣೆಯಲ್ಲಿ ಉದ್ಯುಕ್ತನಾದ. ಇವನು ತಯಾರಿಸಿದ ಆರೈಲ್‍ದ್ವಿಶರ್ಕರವೊಂದರ ಅಯೊಡೊ ಫೀನೈಲ್ ಓಸಜೋನಿನ ಅಣುತೂಕ 4000ಕ್ಕಿಂತ ಹೆಚ್ಚಾಗಿತ್ತು. ಇಷ್ಟಲ್ಲದೆ ಸಂಶೋಧನೆಗೆ ಮಾತ್ರ ಮೀಸಲಾದ ರಾಷ್ಟ್ರೀಯ ಪ್ರಯೋಗಾಲಯವನ್ನು ಸ್ಥಾಪಿಸಿದ ಕೀರ್ತಿ ಇವನಿಗೆ ಸಲ್ಲಬೇಕು.

	ಪಿತ್ರಾರ್ಜಿತ ಆಸ್ತಿಯ ಬೆಂಬಲವಿದ್ದ ಫಿಶರ್ ಆಕರ್ಷಕ ವೇತನದ ಸಲುವಾಗಿ ತನ್ನ ಅಧ್ಯಾಪನ ಮತ್ತು ಸಂಶೋಧನ ವೃತ್ತಿಯನ್ನು ಬದಲಿಸಲು ಎಂದೂ ಇಚ್ಛಿಸಿದವನಲ್ಲ. ಜರ್ಮನಿಯ ಪ್ರಮುಖ ಕೈಗಾರಿಕಾ ಸಂಸ್ಥೆಯಾದ ಬ್ಯಾಡಿಷೆ-ಅನಿಲಿನ್ ಸೋಡಾ ಫ್ಯಾಬ್ರಿಕ್ ಕಂಪನಿ ತನ್ನ ಪ್ರಯೋಗಶಾಲೆಗಳ ನಿರ್ದೇಶಕನ ಹುದ್ದೆಯನ್ನು ವಹಿಸಿಕೊಳ್ಳಬೇಕೆಂದು ಕರೆಯಿತ್ತಾಗ ಫಿಶರ್ ಅದನ್ನು ನಿರಾಕರಿಸಿದ. ವಿಶ್ವವಿದ್ಯಾಲಯಗಳ ಮುಕ್ತ ವಾತಾವರಣದಲ್ಲಿ ಕೆಲಸ ಮಾಡಿದ ಬುದ್ಧಿಜೀವಿಗೆ ಕೈಗಾರಿಕಾ ಕ್ಷೇತ್ರದ ಜಂಜಾಟ ಹಿಡಿಸದಿದ್ದುದು ಸಹಜವೆ. ಇವನ ಒಲವು ಮೂಲತಃ ಆಗ್ರ್ಯಾನಿಕ್ ರಸಾಯನವಿಜ್ಞಾನದ ಕಡೆಗಿದ್ದರೂ ರಸಾಯನವಿಜ್ಞಾನದ ಇತರ ಶಾಖೆಗಳನ್ನು ಇವನು ಎಂದೂ ಕಡೆಗಾಣಿಸಲಿಲ್ಲ. ಇನಾಗ್ರ್ಯಾನಿಕ್ ರಸಾಯನವಿಜ್ಞಾನ ಪರಿಣಿತನಾದ ಆಲ್ಫ್ರೆಡ್ ಸ್ಟೋಕ್ ಮತ್ತು ಮುಂದೆ ಪರಮಾಣು ವಿದಳನವನ್ನು ಆವಿಷ್ಕರಿಸಿ ಪ್ರಸಿದ್ದರಾದ ಆಟೊ ಹಾನ್ ಮತ್ತು ಮೈಟ್ನರ್ ಅವರೂ ಇವನ ಬರ್ಲಿನ್ ಪ್ರಯೋಗಶಾಲೆಯಲ್ಲಿ ತರಬೇತಿಯಾದವರೇ.

	ಒಂದನೆಯ ಮಹಾಯುದ್ಧದ ಬಿಸಿ ಫಿಶರನಿಗೂ ತಟ್ಟಿತು. ಅದರಲ್ಲಿ ಜರ್ಮನಿಯ ಪರಾಭವ, ಯುದ್ಧದಲ್ಲಿ ಇವನ ಮೂವರು ಪುತ್ರರ ಪೈಕಿ ಇಬ್ಬರ ಮರಣ ಮತ್ತು ಯುದ್ಧಕಾಲದಲ್ಲಿ ಸಂಶೋಧನೆಗೆ ಒದಗಿದ ಅಡ್ಡಿ ಆತಂಕಗಳು ಇವೆಲ್ಲದರಿಂದ ಫಿಶರ್ ಬಲು ನೊಂದ. ಏಡಿಗಂತಿ ರೋಗದಿಂದ ನರಳಿ ಮಡಿದ.
(ಎಚ್.ಜಿ.ಐಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ